ಚೆಲಿಯನ್
ಪೂರ್ವ ಶಿಲಾಯುಗದ ಕೈಗೊಡಲಿ ಸಂಸ್ಕøತಿಯ ಎರಡನೆಯ ಹಂತವನ್ನು ನಿರ್ದೇಶಿಸಲು ಬಳಸಲಾಗಿರುವ ಹೆಸರು. ಇತ್ತೀಚೆಗೆ ಇದನ್ನು ಅಬ್ಬೆವಿಲಿಯನ್ ಸಂಸ್ಕøತಿಯೆಂದೂ ಕರೆಯುತ್ತಾರೆ. ಫ್ರಾನ್ಸಿನಲ್ಲಿ ಪ್ಯಾರಿಸ್ ನಗರದ ಪೂರ್ವಕ್ಕಿರುವ ಚೆಲಿ-ಸುರ್-ಮಾರ್ನ್ ಎಂಬಲ್ಲಿ ಮೊದಲ ಬಾರಿಗೆ ಈ ಸಂಸ್ಕøತಿಯ ಅವಶೇಷಗಳನ್ನು ಕಂಡುಹಿಡಿದುದರಿಂದ ಈ ಹೆಸರು ಬಂದಿದೆ. ಆಫ್ರಿಕದಲ್ಲಿ ಹುಟ್ಟಿದ ಈ ಸಂಸ್ಕøತಿ ಕ್ರಮೇಣ ಯೂರೋಪ್ ಏಷ್ಯಗಳಲ್ಲಿ, ಭಾರತದವರೆಗೆ, ಹಬ್ಬಿತ್ತು.

	ಪೂರ್ವ ಆಫ್ರಿಕದ ಟಾನ್‍ಜûನೀಯ ರಾಜ್ಯದ ಓಲ್ಡವೇ ಕಮರಿಯಲ್ಲಿ ವಿಶ್ವದ ಅತ್ಯಂತ ಪ್ರಾಚೀನ ಮಾನವನ ಮತ್ತು ಅವನಿಂದ ನಿರ್ಮಿತವಾದ ಸಂಸ್ಕøತಿಯ ಅವಶೇಷಗಳು ದೊರಕಿವೆ. ಕ್ರಮೇಣ ಆ ಸಂಸ್ಕøತಿಯಿಂದ ಕೈಗೊಡಲಿ ಸಂಸ್ಕøತಿ ಹುಟ್ಟಿಕೊಂಡಿತು. ಅಲ್ಲಿಯ ಮೊದಲ ಹಂತವಾದ ಓಲ್ಡೊವನ್ ಮತ್ತು ಮೂರನೆಯ ಹಂತವಾದ ಅಷ್ಯೂಲಿಯನ್ ಸಂಸ್ಕøತಿಗಳ ನಡುವಣ ಈ ಚೆಲಿಯನ್ ಹಂತದಲ್ಲಿ ಕೈಗೊಡಲಿಗಳು ಬಹಳ ಒರಟಾಗಿರುತ್ತಿದ್ದುವು. ಆಯುಧ ತಯಾರಿಕೆಗೆ ಬಳಸುತ್ತಿದ್ದ ಉಂಡೆಕಲ್ಲುಗಳಿಂದ ಚಕ್ಕೆಗಳನ್ನು ತೆಗೆಯುವ ಕಲೆ ಇನ್ನೂ ಸುಧಾರಿಸಿರಲಿಲ್ಲವಾಗಿ ಕೈಗೊಡಲಿಗಳ ಅಂಚುಗಳು ಮತ್ತು ಮೇಲ್ಮೈ ಅಂಕುಡೊಂಕಾಗಿರುತ್ತಿದ್ದುವು. ಆದ್ದರಿಂದ ಆಯುಧಗಳು ಹರಿತವಾಗಿರುತ್ತಿರಲಿಲ್ಲ. ಚೆಲಿಯನ್ ಹಂತದ ಆಯುಧಗಳ ಸುಧಾರಣೆಯ ಪ್ರಗತಿಯನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಓಲ್ಡೊವನ್ ಆಯುಧಗಳಿಗಿಂತ ಸ್ವಲ್ಪ ನಾಜೂಕಾದ ದಪ್ಪವಾದ ಅಂಚುಗಳು ಇರುತ್ತಿದ್ದುವು. ಎರಡನೆಯ ಹಂತದಲ್ಲಿ ಸುಧಾರಿತ ರೀತಿಯಲ್ಲಿ ಚಕ್ಕೆಗಳನ್ನು ತೆಗೆದ ದೊಡ್ಡವಾದ ಮತ್ತು ಕೊಕ್ಕಿನಾಕಾರದ ತುದಿಯುಳ್ಳ ಕೈಗೊಡಲಿಗಳು ಬಳಕೆಗೆ ಬಂದುವು. ಕಡೆಯ ಹಂತದಲ್ಲಿ ಚಕ್ಕೆ ತೆಗೆಯುವ ವಿಧಾನದಲ್ಲಿ ಹೆಚ್ಚಿನ ಪ್ರಗತಿ ಉಂಟಾಗಿ, ಮೊನೆಯಾದ ತುದಿಯುಳ್ಳ, ತಳಭಾಗ ಚಪ್ಪಟೆಯಾಗಿಯೂ ಮೇಲ್ಭಾಗ ಉಬ್ಬಿಕೊಂಡೂ ಇದ್ದ ಕೈಗೊಡಲಿಗಳು ಬಳಕೆಗೆ ಬಂದುವು.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ